ಡಾ. ರಮೇಶ್ ಹಂಚಿನಮನೆ ತಂಡದ ರಕ್ತರಾತ್ರಿ ಪೌರಾಣಿಕ ನಾಟಕ ಮೈಸೂರು ದಸರಾ ಉತ್ಸವಕ್ಕೆ ಆಯ್ಕೆ ..

ವಿಜಯನಗರ: ಹಗರಿಬೊಮ್ಮನಹಳ್ಳಿಯ ಪ್ರಥಮ ದರ್ಜೆ ಗುತ್ತಿಗೆದಾರರು ಹಾಗು ಮೇರು ನಟರು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ರಮೇಶ್ ಹಂಚಿನಮನೆಯವರ ತಂಡ ಅಭಿನಯಿಸುವ (ಕಂದಗಲ್ ಹನುಮಂತರಾಯರು ರಚಿಸಿದ) ರಕ್ತರಾತ್ರಿ ಪೌರಾಣಿಕ ನಾಟಕವು ನಾಡಹಬ್ಬ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಗೊಂಡಿದೆ. ಸೆಪ್ಟಂಬರ್ ೨೮ ರವಿವಾರ ಬೆಳಗ್ಗೆ ೧೦.೩೦ ರಿಂದ ೧.೦೦ ಗಂಟೆಯವರೆಗೆ ಮೈಸೂರು ಟೌನ್ ಹಾಲ್‌ನಲ್ಲಿ ರಾಜ್ಯ ಸರಕಾರ ಹಾಗು ಮೈಸೂರು ಜಿಲ್ಲಾಡಳಿತ ನಾಟಕ ಪ್ರದರ್ಶನ್ಕಕೆ ಅವಕಾಶ ಕಲ್ಪಿಸಿದ್ದು, ರಾಜ್ಯದಾದ್ಯಂತ ಹೆಸರು ಮಾಡಿದ ಅತ್ಯಂತ ನುರಿತ ನಟನಟಿಯರು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಗಾಧ ಪ್ರತಿಭೆಯ ಡಾ.ರಮೇಶ್ ಹಂಚಿನಮನೆಯವರು ಬಾಲ್ಯದಿಂದಲೂ ನಟನೆಯ ಗೀಳು ಅಂಟಿಸಿಕೊಂಡೇ ಬೆಳೆದವರು. ವಿಜಯನಗರ ಜಿಲ್ಲಾ ಕಲ್ಯಾಣ ಕರ್ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿ ಅನೇಕ ಕಲಾವಿದರಿಗೆ ಮಾಸಾಶನ, ಕಲಾ ಪ್ರದರ್ಶನಕ್ಕೆ ಅವಕಾಶ ನೀಡುತ್ತಾ ಅನೇಕರ ಬೆಳವಣೆಗೆಗೆ ಕಾರಣರಾಗಿದ್ದಾರೆ. ಕಲೆಯನ್ನೆ ತಮ್ಮ ಉಸಿರು ಎಂದು ಬದುಕು ಸಾಗಿಸುತ್ತಿರುವ ಇವರು, ವಿಶ್ವಜ್ಯೋತಿ ಕಲಾ ಸೇವಾ ಟ್ರಸ್ಟ್ ಅಧ್ಯಕ್ಷರಾಗಿಯೂ ಯಶಸ್ವಿಯಾಗಿ ಮುನ್ನೆಡೆಯುತ್ತಿದ್ದಾರೆ.

ಹಗರಿಬೊಮ್ಮನಹಳ್ಳಿ ನಗರದ ಬೋವಿ ಕಾಲೋನಿ ನಿವಾಸಿಯಾಗಿದ್ದು, ಯಲ್ಲಪ್ಪ ಹಂಚಿನಮನೆ, ಹನುಮವ್ವ ಹಂಚಿನಮನೆ ದಂಪತಿಗಳಲ್ಲಿ ಜನಿಸಿದ್ದಾರೆ. ಮೂರು ಗಂಡು ಮತ್ತು ಮೂರು ಹೆಣ್ಣುಮಕ್ಕಳ ತುಂಬು ಕುಟುಂಬ ಇವರದು. ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದರೂ ಪವೃತ್ತಿಯಿಂದ ಪ್ರತಿಭಾನ್ವಿತ ನಟ, ನಿರ್ದೇಶಕರಾಗಿ, ಸಂಘಟಕರಾಗಿ, ಕಲಾಪೋಷಕರಾಗಿ ಅನೇಕ ಕಲಾವಿದರ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಿಕೊಡುತ್ತಿದ್ದಾರೆ. ಅಭಿನಯಿಸಿದ ನಾಟಕಗಳು: ಸುಗಂಧ ಪುಷ್ಪಾ ಹರಣ ಸೇರಿ ಅನೇಕ ಬಯಲಾಟಗಳಲ್ಲಿ ಬಾಲ್ಯವಸ್ಥೆಯಲ್ಲಿಯೇ ಹೆಣ್ಣು, ಗಂಡು ಪಾತ್ರ ನಿರ್ವಹಿಸಿದ್ದಾರೆ. ರಕ್ತರಾತ್ರಿಯಲ್ಲಿ ಭೀಮನ ಪಾತ್ರಕ್ಕೆ ೨೦೦ಕ್ಕು ಹೆಚ್ಚುಸಲ ಬಣ್ಣ ಹಚ್ಚಿದ್ದಾರೆ, ರತ್ನ ಮಾಂಗಲ್ಯ, ಹುಡಿಗಿ ಮೆಚ್ಚಿದ ಹುಂಬ, ಗೌರಿ ಗೆದ್ದಳು, ಜಗಜ್ಯೋತಿ ಬಸವೇಶ್ವರ, ಕಲಿತಕಳ್ಳ ಅನೇಕ ಸಾಮಾಜಿಕ ನಾಟಕಗಳಲ್ಲಿಯೂ ತಮ್ಮ ಭಾವಪೂರ್ಣ ಅಭಿನಯದ ಮೂಲಕ ಚಾಪು ಮೂಡಿಸಿದ್ದಾರೆ.

ಅರಸಿಬಂದ ಪ್ರಶಸ್ತಿಗಳು : ಇವರ ಕಲಾ ಸೇವೆಯನ್ನು ಮೆಚ್ಚಿ ಕರ್ನಾಟಕ ರಾಜ್ಯ ಸರಕಾರ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಏಶಿಯನ್ ಇಂಟರ್ ನ್ಯಾಷನಲ್ ಕಲ್ಚರಲ್ ಯುನಿರ್ವಸಿಟಿಯಿಂದ ಗೌರವ ಡಾಕ್ಟರೇಟ್, ಸಂಗೀತ ಭಾರತಿ ಹೊಸಪೇಟೆಯ ಬಾರ್ಗವ ಪ್ರಶಸ್ತಿ, ಪಂಡಿತ ಪುಟ್ಟರಾಜ ಶ್ರೀ ಪ್ರಶಸ್ತಿ, ನಾಲ್ವಡಿ ಕೃಷ್ಟದೇವರಾಯ ಪ್ರಶಸ್ತಿ, ಕಲಿಯುಗದ ಭೀಮ ಪ್ರಶಸ್ತಿ ಸೇರಿ ನೂರಾರು ಪ್ರಶಸ್ತಿ, ಗೌರವ ಸನ್ಮಾನಗಳು ಇವರ ಕಲೆ ಉತ್ತೇಜನಕ್ಕೆ ಸಹಕಾರಿಯಾಗಿವೆ.ಕಳೆದ ಬಾರಿಯೂ ಇವರ ವಿಶ್ವಜ್ಯೋತಿ ಕಲಾ ಸೇವಾ ಟ್ರಸ್ಟ್ನಿಂದ ರಕ್ತರಾತ್ರಿ ನಾಟಕ ಮೈಸೂರು ದಸರಾ ಉತ್ಸವದಲ್ಲಿ ಪ್ರದರ್ಶನಗೊಂಡು ಜನಮನ್ನಣೆಗೆ ಪಾತ್ರವಾಗಿತ್ತು. ಈ ಬಾರಿಯೂ ಇವರ ಕಲಾ ತಂಡ ಆಯ್ಕೆಯಾಗಿರುವುದು ಕಲಾ ಸೇವೆಗೆ ಸರಕಾರ ನೀಡಿದ ಗೌರವ ಎಂದು ಕಲಾಭಿಮಾನಿಗಳು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ಇವರ ಸೇವೆ ನಾಡಿಗೆ ಇನ್ನೂ ಸಲ್ಲಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿ ಅನೇಕ ಪ್ರಶಸ್ತಿಗಳು ಲಬಿಸಿ ಕಲಾ ಪೋಷಣೆಗೆ ಹೆಚ್ಚು ಶಕ್ತಿ ದೊರೆಯಲಿ ಎನ್ನುವುದು ಕಲಾವಿದರ ಆಶಯವಾಗಿದೆ.

