ಡಾ. ಸುನೀಲ ಪರೀಟ ಅವರಿಗೆ ಆಜೂರ ಪ್ರಶಸ್ತಿ ಪ್ರದಾನ..

ಡಾ. ಸುನೀಲ ಪರೀಟ ಅವರಿಗೆ ಆಜೂರ ಪ್ರಶಸ್ತಿ ಪ್ರದಾನ..

ಬೆಳಗಾವಿ : ಡಾ. ಸುನೀಲ ಪರೀಟ ಅವರು ಬರೆದ *ಮಕ್ಕಳ ನೈತಿಕ ವಚನಗಳು* ಎಂಬ ಕೃತಿಗೆ ಪ್ರತಿಷ್ಠಿತ ಆಜೂರ ಪ್ರಶಸ್ತಿಯನ್ನು ಜನೆವರಿ 15, ಗುರುವಾರ ರಂದು ಪ್ರಶಸ್ತಿ ಪತ್ರ, ಶಾಲು, ಹೂಮಾಲೆ, ಪುಸ್ತಕ ಹಾಗೂ ಧನರಾಶಿಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಹಂದಿಗುಂದ-ಆಡಿ ಸಿದ್ದೇಶ್ವರಮಠದ ಪ.ಪೂ. ಶ್ರೀ ಶಿವಾನಂದ ಮಹಾಸ್ವಾಮಿಗಳು ಆಶೀರ್ವಾದ ನೀಡಿ ಯೋಗ್ಯ ಸಾಹಿತಿಗಳಿಗೆ ಹಾಗೂ ಯೋಗ್ಯ ಸಾಧಕರಿಗೆ ಪ್ರಶಸ್ತಿಯನ್ನು ನೀಡಿದರೆ ಪ್ರಶಸ್ತಿಯ ಮೌಲ್ಯವು ಹೆಚ್ಚಾಗುತ್ತದೆ ಹಾಗೂ ಸಾಧಕರ ಗೌರವೂ ಹೆಚ್ಚಾಗುತ್ತದೆ ಎಂದು ಹೇಳಿದರು. ಹಾರೂಗೇರಿಯ ಆಜೂರ ತೋಟದ ಮಹಾಮನೆಯಲ್ಲಿ ಆಯೋಜಿಸಿದ ಭವ್ಯವಾದ ಕಾರ್ಯಕ್ರಮದಲ್ಲಿ ವಿರಕ್ತಮಠ ಬೆಲ್ಲದಬಾಗೇವಾಡಿಯ ಶ್ರೀ ಶಿವಾನಂದ ಮಹಾಸ್ವಾಮಿಗಳು, ಚಿಮ್ಮಡದ ಶ್ರೀ ಪ್ರಭು ಮಹಾಸ್ವಾಮಿಗಳು, ಶೇಗುಣಸಿಯ ಶ್ರೀ ಮಹಾಂತ ಮಹಾಸ್ವಾಮಿಗಳು, ನಾರಾಯಣ ಶರಣರು, ವಿಠ್ಠಲ್ ಶರಣರು ದಿವ್ಯ ಸಾನಿಧ್ಯ ವಹಿಸಿದ್ದರು. ಬಳ್ಳಾರಿಯ ಶ್ರೀ ರುದ್ರಪ್ಪ ನಿಷ್ಠಿ ಅವರು ಮಾತನಾಡುತ್ತಾ ಆಜೂರ ಪ್ರಶಸ್ತಿಯು ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿಗಿಂತ ಕಡಿಮೆ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರತಿಷ್ಠಾನದ ರೂವಾರಿಗಳು ಶ್ರೀ ಬಸವರಾಜ್ ಆರ್. ಆಜೂರ ಅವರು ಎಲ್ಲ ಗಣ್ಯಮಾನರನ್ನು ಸ್ವಾಗತಿಸಿದರು. ಪ್ರಶಸ್ತಿಯನ್ನು ಸ್ವೀಕರಿಸಿದ ಡಾ. ಸುನೀಲ ಪರೀಟ ಅವರು ಈ ಪ್ರಶಸ್ತಿಯನ್ನು ಪಡೆದು ಅಗಾಧವಾದ ಸಂತೋಷವೂ ಆಗಿದೆ ಹಾಗೂ ಜವಾಬ್ದಾರಿ ಕೂಡ ಹೆಚ್ಚಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಜನ ಸಾಹಿತ್ಯಾಸಕ್ತರು ಹಾಗೂ ಆಜೂರ ಪ್ರತಿಷ್ಠಾನದ ಅಭಿಮಾನಿಗಳು ಆಗಮಿಸಿ ಸಾಕ್ಷಿಯಾಗಿದ್ದರು. ಬೆಳಗಾವಿಯ ಎಂ. ವೈ. ಮೆಣಸಿನಕಾಯಿ, ಡಾ. ಹೇಮಾ ಸೊನೊಳ್ಳಿ, ಜಾನಪದ ಗಾಯಕ ಶಬ್ಬೀರ್ ಡಾಂಗೆ, ಗಾಯಕಿ ಪ್ರೇಮಾ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಡಾ. ಪರೀಟ ಅವರಿಗೆ ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಡಾ. ಡಿ.ಎಸ್. ಕರ್ಕಿ ಪ್ರಶಸ್ತಿ, ಮಂಡಲರತ್ನ ಪ್ರಶಸ್ತಿ, ಭಾರತ ಗೌರವ ಪ್ರಶಸ್ತಿದಂತಹ ಅನೇಕ ಪ್ರಶಸ್ತಿಗಳು ಲಭಿಸಿವೆ.

Leave a Reply

Your email address will not be published. Required fields are marked *