ರಾಜ್ಯಮಟ್ಟದ ಹ್ಯಾಂಡ್ಬಾಲ್ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದ ಕೀರ್ತಿ ತಂದ ಬೇತೆಲ್ ಶಾಲೆಯ ವಿದ್ಯಾರ್ಥಿಗಳು…

ರಾಜ್ಯಮಟ್ಟದ ಹ್ಯಾಂಡ್ಬಾಲ್ ಕ್ರೀಡಾಕೂಟದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದ ಕೀರ್ತಿ ತಂದ ಬೇತೆಲ್ ಶಾಲೆಯ ವಿದ್ಯಾರ್ಥಿಗಳು…

ಗಂಗಾವತಿ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಸರ್ಕಾರ ಹಾಗೂ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್‌ ಇವರ ನೇತೃತ್ವದಲ್ಲಿ ನವೆಂಬರ್ 2ರಿಂದ 9ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಕರ್ನಾಟಕ ರಾಜ್ಯ ಕ್ರೀಡಾಕೂಟ (ಮಿನಿ ಒಲಂಪಿಕ್) ನಲ್ಲಿ ಗಂಗಾವತಿ ತಾಲ್ಲೂಕಿನ ಬೇತೆಲ್ ಆಂಗ್ಲ ಮಾಧ್ಯಮ ಶಾಲೆಯ ಹ್ಯಾಂಡ್ಬಾಲ್ ತಂಡ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟದಲ್ಲಿ ಕಂಗೊಳಿಸಿದೆ.ಈ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾವಿರಾರು ಕ್ರೀಡಾಪಟುಗಳು ಭಾಗವಹಿಸಿದರೂ ಬೇತೆಲ್ ಶಾಲೆಯ ವಿದ್ಯಾರ್ಥಿಗಳು ಶ್ರೇಷ್ಠ ಪ್ರದರ್ಶನ ತೋರಿದರು.ಕಠಿಣ ಶ್ರಮ, ನಿಯಮಿತ ತರಬೇತಿ, ಹಾಗೂ ತಂಡದ ಒಗ್ಗಟ್ಟಿನಿಂದ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಜಯ ಸಾಧಿಸಿದರು.ಸಿದ್ಧತೆ ಮತ್ತು ತರಬೇತಿ ಹಿನ್ನಲೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮತ್ತು ರಾಜ್ಯ ಹ್ಯಾಂಡ್ಬಾಲ್ ತರಬೇತಿದಾರರಾದ ಯಮನೂರಪ್ಪ ಸರ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವಿಶೇಷ ತರಬೇತಿಯನ್ನು ಪಡೆದುಕೊಂಡಿದ್ದರು.ತಾಲೂಕ ಮತ್ತು ಜಿಲ್ಲಾ ಮಟ್ಟದಲ್ಲಿ ನಿರಂತರವಾಗಿ ಜಯಗಳಿಸಿದ ನಂತರ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾದ ಈ ತಂಡವು ಪಂದ್ಯಾವಳಿಗಳಲ್ಲಿ ಶ್ರೇಷ್ಠ ಕ್ರೀಡಾಶೈಲಿಯನ್ನು ಪ್ರದರ್ಶಿಸಿತು.ತರಬೇತಿದಾರ ಯಮನೂರಪ್ಪ ಶಿಕ್ಷಕರು ಮಾತನಾಡಿ “ನಮ್ಮ ವಿದ್ಯಾರ್ಥಿಗಳು ಈ ಮಟ್ಟದ ಸಾಧನೆ ಮಾಡುವುದು ನಮ್ಮೆಲ್ಲರ ಹೆಮ್ಮೆಯ ವಿಷಯ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲುವುದು ಸುಲಭದ ಕೆಲಸವಲ್ಲ. ಅವರು ತೋರಿಸಿದ ಶಿಸ್ತಿನ ಮನೋಭಾವ, ಪರಿಶ್ರಮ ಮತ್ತು ತಂಡಭಾವನೆ ಅವರ ಯಶಸ್ಸಿನ ಕೀಲಿ. ನಾವು ದಿನವೂ ಕಠಿಣ ತರಬೇತಿ ನೀಡಿದ್ದೆವು, ಆದರೆ ಅವರು ತೋರಿಸಿದ ಉತ್ಸಾಹ, ಸಮಯಪಾಲನೆ ಮತ್ತು ಕ್ರೀಡಾ ಮನೋಭಾವ ನಮಗೆ ಸ್ಪೂರ್ತಿ ನೀಡಿದೆ. ಮುಂದಿನ ದಿನಗಳಲ್ಲಿ ಇವರು ರಾಷ್ಟ್ರಮಟ್ಟದಲ್ಲೂ ಕರ್ನಾಟಕದ ಹೆಸರನ್ನು ಎತ್ತುವ ವಿಶ್ವಾಸವಿದೆ,” ಎಂದು ಯಮನೂರಪ್ಪ ಶಿಕ್ಷಕರು ಹೇಳಿದರು.ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮತ್ತು ಗೌರವ ನೆರವೇರಿಸಿದ ಕರ್ನಾಟಕ ರಾಜ್ಯದ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ಆಹಾರ ಸಚಿವರಾದ ದಿನೇಶ್ ಗುಂಡೂರಾವ್, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಕೆ. ಗೋವಿಂದರಾಜ್ ಹಾಗೂ ಉಪಾಧ್ಯಕ್ಷರಾದ ಸಿ.ಎಸ್. ಅರುಣ್ ಮಾಚಯ್ಯ ಪ್ರಶಸ್ತಿಗಳನ್ನು ವಿತರಿಸಿದರು. ನಂತರ ವಿದ್ಯಾರ್ಥಿಗಳು ವಿಜಯದ ಸಂಭ್ರಮದಲ್ಲಿ ಕ್ರೀಡಾಪಟುಗಳು ರಾಜ್ಯದ ಕ್ರೀಡಾಂಗಣದಲ್ಲಿ ಕರ್ನಾಟಕ ಧ್ವಜವನ್ನು ಹಾರಿಸಿ ಹೆಮ್ಮೆಯಿಂದ ಸಂಭ್ರಮಿಸಿದರು.ವಿಜಯದ ಬಳಿಕ ವಿಜಯೋತ್ಸವ ಮೆರವಣಗೆ ಅದ್ದೂರಿಯಾಗಿ ಆಯೋಜಿಸಲಾಯಿತು.ನಗರದ ಬಸ್‌ಸ್ಟ್ಯಾಂಡ್‌ನ ಶ್ರೀಕೃಷ್ಣದೇವರಾಯ ವೃತ್ತದಿಂದ ಬೇತೆಲ್ ಶಾಲೆಯ ಆವರಣದವರೆಗೆ ಭರ್ಜರಿ ಮೆರವಣಿಗೆಯನ್ನು ನಡೆಸಿ ವಿದ್ಯಾರ್ಥಿಗಳನ್ನು ಕ್ರೀಡಾಭಿಮಾನಿಗಳು, ಶಿಕ್ಷಕರು ಮತ್ತು ಪಾಲಕರು ಸ್ವಾಗತಿಸಿದರು.ಮೆರವಣಿಗೆಯಲ್ಲಿ ತಾಳ-ಮದ್ದಳೆ, ಬಾವುಟಗಳು ಮತ್ತು ಜಯಘೋಷಗಳಿಂದ ನಗರ ಕ್ರೀಡಾ ಸಂಭ್ರಮದಿಂದ ಕಂಗೊಳಿಸಿತು.

ಕಾರ್ಯಕ್ರಮದ ಚಾಲನೆ ಮತ್ತುಮೆರವಣಿಗೆಗೆ ಚಾಲನೆ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೆಚ್.ಬಿ. ನಟೇಶ್ ರವರು ಮಾತನಾಡಿ ಬೇತಲ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹ್ಯಾಂಡ್ಬಾಲ್ ತಂಡ ಪ್ರಥಮ ಸ್ಥಾನ ಪಡೆದು ತಾಲೂಕಿಗೆ ಮತ್ತು ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ. ಆ ಸಂಸ್ಥೆಗೆ ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ರಫೀಕ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಜು ಸುಧಾಕರ್, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತ ರಾಜು, ಹಾಗೂ ದೈಹಿಕ ಶಿಕ್ಷಕ ವೃಂದ, ಪಾಲಕರು ಮತ್ತು ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.ಬೇತೆಲ್ ಶಾಲೆಯ ಈ ಸಾಧನೆ ಜಿಲ್ಲೆಯ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದೆ. ವಿದ್ಯಾರ್ಥಿಗಳ ಪರಿಶ್ರಮ, ಶಿಕ್ಷಕರ ಮಾರ್ಗದರ್ಶನ ಮತ್ತು ಶಾಲಾ ಆಡಳಿತದ ಬೆಂಬಲದಿಂದ ಈ ಯಶಸ್ಸು ಸಾಧ್ಯವಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

Leave a Reply

Your email address will not be published. Required fields are marked *