ಅಗತ್ಯ ಸೌಲಭ್ಯಗಳು ಇಲ್ಲದಿದ್ದರೂ ಕಷ್ಟವಾಗದ ಕುಸ್ತಿರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸತ್ಯಶ್ರೀ

ಅಗತ್ಯ ಸೌಲಭ್ಯಗಳು ಇಲ್ಲದಿದ್ದರೂ ಕಷ್ಟವಾಗದ ಕುಸ್ತಿ
ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸತ್ಯಶ್ರೀ

ಹೊಸಪೇಟೆ (ವಿಜಯನಗರ), ನ.ಅಗತ್ಯ ಸೌಲಭ್ಯಗಳು ಇಲ್ಲದಿದ್ದರೂ ಕಷ್ಟವಾಗದ ಕುಸ್ತಿ
ರಾಜ್ಯಮಟ್ಟದಲ್ಲಿ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸತ್ಯಶ್ರೀ: ಸೂಕ್ತ ತರಬೇತಿ ಹಾಗೂ ಅಗತ್ಯ ಸೌಲಭ್ಯಗಳ ಕೊರತೆಯ ಮಧ್ಯೆ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಮೊದಲನೆ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಯುವತಿಯೊಬ್ಬಳು ಹುಬ್ಬೇರಿಸುವಂತೆ ಮಾಡಿದ್ದಾಳೆ.
ಹೊಸಪೇಟೆಯ ಓಸೊಫಿಕಲ್ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಸತ್ಯಶ್ರೀ ಎಂಬ ಯುವತಿಯೇ ಈ ಸಾಧನೆಯನ್ನು ಮಾಡಿದ್ದಾಳೆ. ಕರ್ನಾಟಕ ರಕ್ಷಣಾ ವೇದಿಕೆ ಯುವ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ವಿಜಯಕುಮಾರ್ ಅವರ ಮಗಳಾದ ಈಕೆ, ಬಾಲ್ಯದಿಂದಲೂ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸುತ್ತಾ ಬಂದಿದ್ದಾಳೆ.

ಇತ್ತೀಚಿಚಗೆ ಹರಪನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ 76 ಕೆ.ಜಿ. ತೂಕದ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಎದುರಾಳಿಯನ್ನು ನೆಲಕ್ಕೆ ಕೆಡವಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಮುಂಬರುವ ದಿನಗಳಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿರುವ ಸತ್ಯಶ್ರೀಗೆ ಅಗತ್ಯ ಸೌಲಭ್ಯಗಳು ದೊರೆಯುತ್ತಿಲ್ಲ. ವಾರಕ್ಕೊಮ್ಮೆ ತರಬೇತಿ ಪಡೆಯುತ್ತಿರುವ ಈಕೆಯ ಕುಸ್ತಿಯ ಅಭ್ಯಾಸಕ್ಕೆ ಮ್ಯಾಟ್‍ನ ಸೌಲಭ್ಯಗಳಿಲ್ಲ.

ಹೀಗಾಗಿ ಮೈದಾನದ ಮಣ್ಣಿನ ನೆಲದ ಮೇಲೆಯೇ ಅಭ್ಯಾಸ ಮಾಡಬೇಕಾಗಿದೆ. ಮರಿಯಮ್ಮನಹಳ್ಳಿಯ ಹನುಮಂತ ಹಾಗೂ ಶಿವಮೊಗ್ಗದ ಸಂಜೀವ್ ಎಂಬ ಇಬ್ಬರು ಈಕೆಗೆ ಸದ್ಯಕ್ಕೆ ತರಬೇತಿ ನೀಡುವುದರ ಜೊತೆಗೆ ಕೆಲವು ಟೆಕ್ನಿಕ್‍ಗಳನ್ನು ಹೇಳಿಕೊಡುತ್ತಿದ್ದಾರೆ. ಇವುಗಳ ಆಧಾರದ ಮೇಲೆ ಸತ್ಯಶ್ರೀ ಪ್ರತಿಯೊಂದು ಸ್ಪರ್ಧೆಯಲ್ಲಿಯೂ ವಿಜಯ ಯಾತ್ರೆ ಮುಂದುವರೆಸಿದ್ದಾಳೆ. ಓಲಂಪಿಕ್ ಕುಸ್ತಿಪಟು ವಿನೀಸ್ ಪೋಗಟ್ ಈಕೆಗೆ ಆದರ್ಶವಾಗಿದ್ದು, ಕೊಪ್ಪಳ ಗವಿಸಿದ್ದೇಶ್ವರ ಕಾಲೇಜಿನ ದೈಹಿಕ ಶಿಕ್ಷಕ ಈಶಪ್ಪ ದೊಡ್ಡಮನಿ ಅವರು ಈಕೆಗೆ ಪ್ರೇರಣೆಯಾಗಿದ್ದಾರೆ. ಸತ್ಯಶ್ರೀಗೆ ಮೊಟ್ಟಮೊದಲ ಬಾರಿಗೆ ಕುಸ್ತಿಯ ಪರಿಚಯ ಮಾಡಿಸಿದ್ದೇ ಈಶಪ್ಪ ದೊಡ್ಡಮನಿ. ಸ್ಥಳೀಯವಾಗಿ ನಡೆಯುವ ಬಯಲು ಕುಸ್ತಿ ಸೇರಿದಂತೆ ನಾಲ್ಕುಬಾರಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ್ದಾಳೆ.

ಆನೆಗೊಂದಿ, ಮೈಸೂರು ದಸರಾ ಉತ್ಸವಗಳಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡು ಮೊದಲ ಬಹುಮಾನ ತನ್ನದಾಗಿಸಿಕೊಂಡಿದ್ದಾಳೆ. ಕುಸ್ತಿ ಪಂದ್ಯಾವಳಿಯ ತನ್ನೆಲ್ಲಾ ಸಾಧನೆಗೆ ನನ್ನ ಪಾಲಕರು ಸಹಕಾರ, ನೆರವು ಕಾರಣ. ಹುಡಿಗಿಯಾದ ನನ್ನನ್ನು ಯಾವುದೇ ಭಯವಿಲ್ಲದೇ ನನ್ನಮೇಲೆ ಭರವಸೆಯಿಂದ ನನ್ನ ಪಾಲಕರು ಕುಸ್ತಿ ಅಖಾಡಕ್ಕೆ ಕಳುಹಿಸಿದ್ದಾರೆ. ಆನೆಗೊಂದಿ ಉತ್ಸವದಲ್ಲಿ ಹುಡುಗರೊಂದಿಗೆ ಕುಸ್ತಿಪಂದ್ಯಾವಳಿಗಳಲ್ಲಿ ಸ್ಪರ್ಧಿಸುವಾಗಲೂ ಕೂಡ ನನ್ನ ಪಾಲಕರು ಯಾವುದೇ ವಿರೋಧ ವ್ಯಕ್ತಪಡಿಸದೇ ಬೆಂಬಲಿಸಿದ ಕಾರಣ ಪ್ರಥಮ ಸ್ಥಾನ ಗಳಿಸುವಂತಾಯಿತು.
ಅತ್ಯಾಧುನಿಕ ಸೌಲಭ್ಯ ಹಾಗೂ ಸೂಕ್ತ ತರಬೇತಿ ದೊರೆತಲ್ಲಿ ಇನ್ನೂ ಹೆಚ್ಚಿನ ಸಾಧನೆಗೆ ಸಹಕಾರಿಯಾಗಲಿದೆ. ಮುಂಬರುವ ದಿನಗಳಲ್ಲಿ ರಾಜಸ್ಥಾನದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಪ್ರಥಮ ಸ್ಥಾನ ಗಳಿಸುವ ಭರವಸೆಯಿದೆ. ನನ್ನ ಪಾಲಕರ ಪ್ರೋತ್ಸಾಹ ಹಾಗೂ ತರಬೇತಿದಾರರ ನೆರವಿನಿಂದ ಮುಂಬರುವ ದಿನಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸುವ ವಿಶ್ವಾಸವಿದೆ ಎಂಬುವುದು ಸತ್ಯಶ್ರೀಯ ಭರವಸೆಯ ಮಾತುಗಳು. ಈ ಹುಡುಗಿಯ ಸಾಧನೆಗೆ ಮೆಚ್ಚಿರುವ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಸಾ.ರಾ.ಗೋವಿಂದ ಅವರು ಪ್ರೋತ್ಸಾಹಿಸಿ ಬೆನ್ನು ತಟ್ಟಿದ್ದಾರೆ. ಕುಸ್ತಿಪಟು ಸತ್ಯಶ್ರೀಯ ಸಾಧನೆಗೆ ಬೆಂಬಲಿಸಿ ಪ್ರೋತ್ಸಾಹಿಸಲು 9535489455 (ಆರ್.ವಿಜಯಕುಮಾರ) ಕರೆ ಮಾಡಿ. ನಿಮ್ಮೆಲ್ಲರ ಪ್ರೋತ್ಸಾಹದಾಯಕ ನುಡಿಗಳು ಸತ್ಯಶ್ರೀಯನ್ನು ಇನ್ನಷ್ಟು ದೃಢವಾಗಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೆ ಪ್ರೇರೇಪಿಸಲಿ ಎಂಬುವುದು ಪತ್ರಿಕೆಯ ಸದಾಶಯ.

Leave a Reply

Your email address will not be published. Required fields are marked *