ಮಾನ್ಯರೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯರು ಸಕ್ರಿಯವಾಗಿ ಭಾಗವಹಿಸಲಿ ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಸಲಹೆ,,

ಗಂಗಾವತಿ : > ಮಹಿಳೆಯರು ಸಮಾಜದ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಗ್ರಾಮ ಸಭೆ ನೋಡಲ್ ಅಧಿಕಾರಿಗಳು ಹಾಗೂ ತಾ.ಪಂ. ಸಹಾಯಕ ನಿರ್ದೇಶಕರಾದ (ಗ್ರಾ. ಉ.) ಮಹಾಂತಗೌಡ ಪಾಟೀಲ್ ಅವರು ಹೇಳಿದರು.ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತ್ ನಿಂದ ಶನಿವಾರ ಆಯೋಜಿಸಿದ್ದ ಮಹಿಳಾ ಗ್ರಾಮ ಸಭೆಯಲ್ಲಿ ಮಾತನಾಡಿದರು.ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಹಿಳೆಯರಿಗೆ ವಿಶೇಷ ಅವಕಾಶ, ಯೋಜನೆಗಳನ್ನು ನೀಡುತ್ತಿವೆ. ಗ್ರಾ.ಪಂ.ಗಳು ಮಹಿಳಾ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ. ಗ್ರಾಮೀಣ ಮಹಿಳೆಯರಿಗೆ ಶಿಕ್ಷಣ ಮತ್ತು ಹಕ್ಕುಗಳ ಬಗ್ಗೆ ಮಾಹಿತಿ ನೀಡಲು ಗ್ರಾಮಸಭೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಾವಲಂಬಿ ಬದುಕುಕಟ್ಟಿಕೊಳ್ಳಲು ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆ ತುಂಬಾ ಅನುಕೂಲವಾಗಿದ್ದು, ಈ ಯೋಜನೆಯಿಂದ ಮಹಿಳಾ ಸ್ವಸಹಾಯ ಸಂಘದವರು ಸಾಲ ಸೌಲಭ್ಯ ಪಡೆದುಕೊಳ್ಳುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಜೊತೆಗೆ ಲಿಂಗ ತಾರತ್ಯಮ್ಯ ಹೋಗಲಾಡಿಸಲು ನರೇಗಾ ಯೋಜನೆಯಲ್ಲಿ ಮಹಿಳೆ-ಪುರುಷರಿಗೆ ಸಮಾನ ಕೂಲಿ ನೀಡಲಾಗುತ್ತಿದೆ. ಸ್ತ್ರೀ ಶಕ್ತಿ ಚೇತನ ಅಭಿಯಾನ ಹಮ್ಮಿಕೊಂಡು ನರೇಗಾದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವ ಕೆಲಸವಾಗುತ್ತಿದೆ ಎಂದರು.ಮಹಿಳೆಯರ ಹಕ್ಕುಗಳ ರಕ್ಷಣೆ, ಮಹಿಳೆಯರ ಮೇಲಿನ ದೌರ್ಜನ್ಯ ತಡೆ, ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರ ಶ್ರೆಯೋಭಿವೃದ್ಧಿಗೆ ಎಲ್ಲರೂ ಸಹಕರಿಸಬೇಕು ಎಂದರು.ಗ್ರಾ.ಪಂ. ಪಿಡಿಓ ಮಂಗಳಪ್ಪ ನಾಯಕ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೆ.ಸುನೀತಾ, ಉಪಾಧ್ಯಕ್ಷರಾದ ಹುಲಿಗೆಮ್ಮ, ಸದಸ್ಯರಾದ ನಿರ್ಮಲ, ಸಂಜೀವಿನಿ ಒಕ್ಕೂಟದ ಅಧ್ಯಕ್ಷರಾದ ಯಡ್ಲಪಲ್ಲಿ ಪದ್ಮರಾಣಿ, ಮತ್ತು ಪದಾಧಿಕಾರಿಗಳು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮದ ಮಹಿಳೆಯರು ಮತ್ತು ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.
