ಜೊಡೆತ್ತುಗಳ ಆರಾಧನೆ -ಮಣ್ಣೆತ್ತಿನ ಅಮವಾಸ್ಯೆ…

ಜೊಡೆತ್ತುಗಳ ಆರಾಧನೆ -ಮಣ್ಣೆತ್ತಿನ ಅಮವಾಸ್ಯೆ ನಮ್ಮ ನಾಡಿನಲ್ಲಿ ಪ್ರಕೃತಿಯಲ್ಲಿನ ಮರ ಗಿಡಗಳನ್ನು ಹಾಗೂ ಹಲವು ಜೀವಿಗಳನ್ನು , ದೈವಿ ಸ್ವರೂಪದಲ್ಲಿ ಕಾಣಲಾಗುತ್ತೆ ಮತ್ತು ಅವುಗಳನ್ನು ಶ್ರದ್ಧಾ ಭಕ್ತಿಯಿಂದ ಆರಾಧಿಸಲಾಗುತ್ತದೆ. ಹಾಗೇ ಎತ್ತುಗಳನ್ನು ಮುಂಗಾರು ಉತ್ಸವ ಕಾರು ಹುಣ್ಣಿಯಂದು , ನಂತರ ಮಣ್ಣೆತ್ತಿನ ಅಮವಾಸ್ಯೆದಿನದಂದು ಬಸವಣ್ಣ ನೆಂದೇ ಪೂಜಿಸಿ ಆರಾಧಿಸಲಾಗುತ್ತದೆ. ಅಷ್ಟು ಮಾತ್ರವಲ್ಲ ನಮ್ಮ ಪೂರ್ವಜರು ರೈತಾಪಿಜನರು , ಬೂಮಿಯಲ್ಲಿನ ಕಲ್ಲು-ಮಣ್ಣಿನಲ್ಲಿಯೇ ದೈವತ್ವವನ್ನು ಕಂಡವರಾಗಿದ್ದಾರೆ. ನಾಗರ ಪಂಚಮಿಯಲ್ಲಿ ನಾಗರ ಹಾವಿನ ಮೂರ್ತಿ , ಗಣೇಶ ಹಬ್ಬದಲ್ಲಿ ಆನೆಯ ಸೊಂಡಿಲ ಗಣೇಶ ಹಾಗೂ ಇಲಿಯಾಗಿರುವ ಮೂಷಿಕರಾಜನ ಮಣ್ಣಿನ ಮೂರ್ತಿ. ದಸರಾ ಹಬ್ಬದಲ್ಲಿ ಕಾಳಿಕಾಂಬೆಯ ಮಣ್ಣಿನ ಮೂರ್ತಿ , ಶಿವರಾತ್ರಿ ಹಬ್ಬದಂದು ಶಿವನ ಮಣ್ಣಿನ ಮೂರ್ತಿ. ಕಾಮನ ಹಬ್ಬದಲ್ಲಿ ಮಣ್ಣಿನ ಕಾಮನ ಮೂರ್ತಿ . ಹೀಗೇ ಮಣ್ಣು ಮಣ್ಣಿನ ಮೂರ್ತಿಗಳಪಟ್ಟಿ ಬೆಳೆಯುತ್ತಾ ಹೋಗುತ್ತದೆ, ಇದು ಮಣ್ಣಿಗೂ ಆರಾಧನೆಗೂ ಆಧ್ಯಾತ್ಮಿಕತೆಗೂ ಇರುವ ನಂಟನ್ನು ಸೂಚಿಸುತ್ತದೆ. ಸಂಪ್ರದಾಯಿಕ ಆಚರಣೆಗಳು ನಗರ ಪಟ್ಟಣಗಳಲ್ಲಿ ಆಧುನಿಕ ಭರಾಟೆಯಲ್ಲಿ ಅತಿ ವಿರಳವಾಗಿದ್ದು , ನಮ್ಮ ದೇಶದ ನರ ನಾಡಿಗಳಂತಿರುವ ಗ್ರಾಮೀಣ ಭಾಗದಲ್ಲಿ ಈಗಲೂ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಮಣ್ಣೆತ್ತಿನ ಅಮವಾಸ್ಯೆ 2025ರ ಜೂ 25ರಂದು ಇದ್ದು , ರೈತರು ವಿಶೇಷ ಹಬ್ಬವನ್ನು ಬಹು ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ. .

ಜೋಡೆತ್ತುಗಳ ಜೋಡಿ ಬಲು ಜೋರು.. ಪಟ್ಟಣ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ , ಕುಂಬಾರರು ಚಿತ್ರಗಾರರು ತಯಾರಿಸಿದ ಮಣ್ಣಿನ ಎತ್ತುಗಳಿಗೆ ತುಂಬಾ ಬೇಡಿಕೆ. ನಗರ ಪ್ರದೇಶಗಳ ಮಾರುಕಟ್ಟೆಯಿಂದ ತಂದ ಮಣ್ಣೆತ್ತುಗಳನ್ನು , ಸಿಂಗರಿಸಿದ ಜೋಡೆತ್ತುಗಳನ್ನು ನೋಡುವುದಕ್ಕೆ ಬಲು ಚಂದ. ಮಣ್ಣಿನ ಎತ್ತುಗಳನ್ನು ದೇವರ ಜಗುಲಿಯ ಮೇಲಿಟ್ಟು , ಪೂಜೆಗೈಯ್ಯಲಾಗುತ್ತೆ ಹಾಗೂ ಆರಾಧಿಸಲಾಗುತ್ತದೆ. ಮನೆಯ ಹೆಂಗಸರು ಹೋಳಿಗೆ, ಕಡಬು ಸೇರಿದಂತೆ ಸಿಹಿ ಖಾದ್ಯಗಳನ್ನು ತಯಾರಿಸಿ ಜೋಡೆತ್ತುಗಳಿಗೆ ನೈವೇದ್ಯ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಮನೆಯಲ್ಲಿನ ಎತ್ತುಗಳ ದನ-ಕರುಗಳ ಮೈತೊಳೆದು ಪೂಜೆಗೆ ಸಿಂಗರಿಸುತ್ತಾರೆ , ಮಣ್ಣೆತ್ತುಗಳಿಗೆ ಕಾಯಿ, ಕರ್ಪೂರ, ಊದಬತ್ತಿ ಬೆಳಗಿ ಎಡೆ ಹಿಡಿದು ಪೂಜಿಸುತ್ತಾರೆ.ಸಕಲ ಜೀವರಾಶಿಗಳಿಗೆ ಅನ್ನ ಹಾಕುವ ಭೂತಾಯಿಗೆ , ಈ ಮೂಲಕ ಪೂಜೆ ಸಲ್ಲಿಸಿ ಕೃತಜ್ಞತೆ ಅರ್ಪಿಸುತ್ತಾರೆ. ದೇವಸ್ಥಾನಗಳಿಗೆ ಕಾಯಿ, ಕರ್ಪೂರದೊಂದಿಗೆ ತೆರಳಿ , ಎಡೆ ಹಿಡಿದು ಬಂದು ಮನೆ ಮಂದಿಯಲ್ಲಾ ಒಟ್ಟಾಗಿ ಕುಳಿತು ಊಟ ಮಾಡುತ್ತಾರೆ. ಸಂಜೆ ಹೆಣ್ಣು ಮಕ್ಕಳು ಮನೆಮನೆಗೆ ತೆರಳಿ , ಪೂಜಿಸಲ್ಪಟ್ಟ ಎತ್ತುಗಳಿಗೆ ಆರತಿ ಬೆಳಗಿ ಸಂಭ್ರಮಿಸುತ್ತಾರೆ. ಈ ಹಬ್ಬ ಮಣ್ಣಿನ ಮಕ್ಕಳಿಗೆ ಅತ್ಯಂತ ಪವಿತ್ರವಾದುದು. ‘ಮಣ್ಣೆತ್ತುಗಳು ಜೋಡಿಗೆ 30-50 ಹಾಗೂ ದೊಡ್ಡವು ಮಾರಲಾಗುತ್ತದೆ. ಈ ಬಾರಿ ಅಷ್ಟು ಬೇಡಿಕೆ ಇಲ್ಲ’ ಎನ್ನುತ್ತಾರೆ ಮಣ್ಣೆತ್ತುಗಳ ತಯಾರಕರು. ಅಖಂಡ ಬಳ್ಳಾರಿ ಜಿಲ್ಲೆಯ ಹಲವೆಡೆ ಮಣ್ಣಿನಿಂದ ತಯಾರಿಸಿದ, ನೀರಿನಲ್ಲಿ ಕರಗುವ (ಯಾವುದೇ ಬಣ್ಣ ಹಚ್ಚದೇ ಇರೊ ಮಣ್ಣಿನ ) ಬಸವಣ್ಣಗಳ ಮಾರಾಟ ಮಾಡಲಾಗುತ್ತದೆ.

✍🏻 *ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428*

Leave a Reply

Your email address will not be published. Required fields are marked *