“ಅಲೆಮಾರಿ ಸಮುದಾಯಕ್ಕೆ ಕನಿಷ್ಠ 1% ಮೀಸಲಾತಿಗೆ ಒತ್ತಾಯ – ಆ.29 ರಂದು ಹೋರಾಟಕ್ಕೆ ಕರೆ” : ಆರ್. ಕೃಷ್ಣ# “ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ 49 ಉಪಜಾತಿಗಳ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಲು ಮನವಿ…

ಕೊಪ್ಪಳ, ಆಗಸ್ಟ್ 28:ಸದಾಶಿವ ಆಯೋಗದ ಶಿಫಾರಸಿನಂತೆ ರಾಜ್ಯ ಸರ್ಕಾರವು ಒಳ ಮೀಸಲಾತಿಯನ್ನು ಜಾರಿಗೊಳಿಸಿರುವುದು ಸ್ವಾಗತಾರ್ಹ, ಆದರೆ, ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳಿಗೆ ನಿರ್ದಿಷ್ಟ ಮೀಸಲಾತಿ ನೀಡದಿರುವುದು ಭಾರೀ ಅನ್ಯಾಯವಾಗಿದೆ, ಈ ಅನ್ಯಾಯವನ್ನು ಪ್ರಶ್ನಿಸಿ, ಆಗಸ್ಟ್ 29ರಂದು ಕೊಪ್ಪಳದ ಅಶೋಕ ವೃತ್ತದಿಂದ ಜಿಲ್ಲಾಡಳಿತ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್. ಕೃಷ್ಣ (ಗಂಗಾವತಿ) ಅವರು, “ಅಲೆಮಾರಿ ಸಮುದಾಯಗಳಿಗೆ ಕನಿಷ್ಠ 1% ಮೀಸಲಾತಿ ನೀಡದಿರುವುದು ಸರ್ಕಾರದ ದೊಡ್ಡ ನಿರ್ಲಕ್ಷ್ಯ. ನಾವು ನಾಡಿಗೆ ಶತಮಾನಗಳಿಂದ ಕಲೆ, ಸಂಸ್ಕೃತಿ, ಪುರಾಣಗಳ ಐತಿಹ್ಯವನ್ನು ಸಾರಿದರೂ, ನಮ್ಮ ಬದುಕು ಮಾತ್ರ ಬತ್ತಿ ಹೋಗಿದೆ. ಸರ್ಕಾರ ತಕ್ಷಣವೇ ತಿದ್ದುಪಡಿ ಮಾಡಿ ಕನಿಷ್ಠ ನಮ್ಮ ಸಮುದಾಯಕ್ಕೆ 1% ಮೀಸಲಾತಿ ಘೋಷಿಸದಿದ್ದರೆ ತೀವ್ರ ಹೋರಾಟ ಅನಿವಾರ್ಯ” ಎಂದು ಎಚ್ಚರಿಸಿದರು.ಈ ನಾಡಿಗೆ ಮತ್ತು ದೇಶಕ್ಕೆ ಅಲೆಮಾರಿ ಸಮುದಾಯಗಳು ನೀಡಿದ ಕೊಡುಗೆ ಅನನ್ಯ ಅದನ್ನ ಯಾರು ಅಲ್ಲಗಳಿಯುವಂತಿಲ್ಲ. ಈ ನಾಡಿಗೆ ದೇಶಕ್ಕೆ ಸಂಸ್ಕೃತಿಯನ್ನು ವರ್ಗಾವಣೆ ಮಾಡುವಲ್ಲಿ ನಮ್ಮ ಸಮುದಾಯಗಳು ಅಲೆಮಾರಿಗಳಾಗಿ ಮಾರ್ಪಟ್ಟಿವೆ. ಇದನ್ನ ಯಾವ ಸಮುದಾಯ ಮತ್ತು ಸರ್ಕಾರಗಳು ಮರೆಯುವಂತಿಲ್ಲ. ನಾಡಿಗಾಗಿ ಮತ್ತು ದೇಶ ಸುಸಂಸ್ಕೃತ ರಾಗಲು ಅಲೆಮಾರಿ ಸಮುದಾಯಗಳು ತಮ್ಮ ಬದುಕಿನ ನೆಲೆಯನ್ನ ಕಳೆದುಕೊಂಡಿವೆ. ದಯವಿಟ್ಟು ಸರ್ಕಾರಗಳು ನಮ್ಮ ಸಮುದಾಯಗಳು ನಾಡಿಗೆ ನೀಡಿದ ಸೇವೆಯನ್ನು, ನಮ್ಮ ತ್ಯಾಗವನ್ನ ಗೌರವಿಸಲಿ. ಸರ್ಕಾರವು ಹಲವು ವರ್ಗಗಳಿಗೆ ಮೀಸಲಾತಿ ನೀಡಿರುವಾಗ, ಶತಮಾನಗಳಿಂದ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ನಿರ್ದಿಷ್ಟ ಮೀಸಲಾತಿ ನೀಡದೇ ಇರುವುದು ನಮ್ಮ ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ.ನಮ್ಮ ಕಲೆ ಈ ನಾಡಿನ ಸಂಸ್ಕೃತಿಯ ಪ್ರತಿಬಿಂಬ. ಆದರೆ ನಮ್ಮ ಬದುಕು ಕತ್ತಲೆಯಲ್ಲೇ ಉಳಿದಿದೆ,” “ವಿವಿಧ ವರ್ಗಗಳಿಗೆ ಮೀಸಲಾತಿ ನೀಡುವಾಗ ನಮ್ಮನ್ನು ಹೊರತುಪಡಿಸುವುದು ನ್ಯಾಯವೇ? ನಮಗೆ ಕನಿಷ್ಠ 1% ಮೀಸಲಾತಿ ನೀಡದಿರುವುದು ನಮ್ಮ ಮುಂದಿನ ಪೀಳಿಗೆಯ ಕನಸುಗಳ ಮೇಲೆಯೂ ದಾಳಿ” ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆ.29ರಂದು ನಡೆಯಲಿರುವ ಪ್ರತಿಭಟನೆಗೆ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದ 49 ಉಪಜಾತಿಗಳ ಜನರು ಭಾಗಿಯಾಗಿ, ಹೋರಾಟವನ್ನು ಯಶಸ್ವಿಗೊಳಿಸಲು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದರು.