ತುಂಗಭದ್ರ ಆರತಿ ಮಹೋತ್ಸವ ಮತ್ತು ಬಾಗಿನ ಸಮರ್ಪಣೆ.. ಭರದ ಸಿದ್ಧತೆ..

ತುಂಗಭದ್ರ ಆರತಿ ಮಹೋತ್ಸವ ಮತ್ತು ಬಾಗಿನ ಸಮರ್ಪಣೆ.. ಭರದ ಸಿದ್ಧತೆ..

ಕೊಪ್ಪಳ ಆಗಸ್ಟ್ 25 (ಕರ್ನಾಟಕ ವಾರ್ತೆ): ಆ.26ರ ಮಂಗಳವಾರದಂದು ತುಂಗಭದ್ರ ಆರತಿ ಮಹೋತ್ಸವ ಮತ್ತು ಬಾಗಿನ ಸಮರ್ಪಣೆಯನ್ನು ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿತೀರದಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ಸಂಸದರಾದ ರಾಜಶೇಖರ ಬಸವರಾಜ ಹಿಟ್ನಾಳ ಹೇಳಿದರು.

ಅವರು ಸೋಮವಾರದಂದು ಕೊಪ್ಪಳ ತಾಲ್ಲೂಕಿನ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯಾಲಯದಲ್ಲಿ ಶ್ರೀ ಕ್ಷೇತ್ರ ಹುಲಿಗಿಯ ತುಂಗಭದ್ರಾ ನದಿ ತೀರದಲ್ಲಿ ತುಂಗಭದ್ರಾ ಆರತಿ ಉತ್ಸವ ಆಚರಣೆಯ ಕುರಿತು ಮಾಹಿತಿ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪವಿತ್ರ ತೀರ್ಥ ಕ್ಷೇತ್ರ ಕಾಶಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಂತೆ ತುಂಗಭದ್ರ ಆರತಿ ಮಹೋತ್ಸವ ಬಾಗಿನ ಸಮರ್ಪಣೆ ಕಾರ್ಯಕ್ರಮವನ್ನು ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಕೊಪ್ಪಳ ಜಿಲ್ಲಾಡಳಿತ ಹಾಗೂ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆ. 26 ರಂದು ಸಂಜೆ 6.30 ಗಂಟೆಗೆ ತುಂಗಭದ್ರಾ ನದಿತೀರದಲ್ಲಿ ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಾರಿಗೆ ಮತ್ತು ಮುಜರಾಯಿ ಇಲಾಖೆಯ ಸಚಿವರಾದ ರಾಮಲಿಂಗಾರೆಡ್ಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿ ಸೇರಿದಂತೆ ಕೊಪ್ಪಳ ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು ಹಾಗೂ ಇತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.ತುAಗಭದ್ರ ಆರತಿ ಮಹೋತ್ಸವದ ಪ್ರಯುಕ್ತ ಆ. 26ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 12.30 ಗಂಟೆಯವರೆಗೆ ಚಂಡಿಕಾ ಹೋಮ ಮತ್ತು ಮಧ್ಯಾಹ್ನ 12.30 ರಿಂದ 3 ಗಂಟೆಯವರೆಗೆ ಭಕ್ತರಿಗೆ ವಿಶೇಷ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ. ಅಂದು ಸಂಜೆ 4 ರಿಂದ 5.30 ರವರೆಗೆ ಹುಲಿಗಿಯ ಹಿಟ್ನಾಳ ರಸ್ತೆಯ ಚೆನ್ನಮ್ಮ ಸರ್ಕಲ್ ದಿಂದ ದೇವಸ್ಥಾನದ ವರೆಗೆ ಮಾಹಿಳೆಯರಿಂದ ವಿಶೇಷ ಕುಂಭ ಮೆರೆವಣಿಗೆ ನಡೆಯಲಿದೆ. ಇದರಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಭಾವಚಿತ್ರದ ಮೆರೆವಣಿಗೆಯೂ ಜರುಗಲಿದೆ. ನಂತರ ದೇವಸ್ಥಾನದ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ನದಿತೀರದಲ್ಲಿ ಪ್ರತಿಷ್ಠಾಪನೆ ಮಾಡಿ, ವಿಶೇಷ ಪೂಜೆ ಮಾಡಲಾಗುವುದು. ಅಲ್ಲಿ ಸಂಜೆ 5.30 ರಿಂದ 6 ಗಂಟೆಯವರೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ. ಬಳಿಕ ಭರತನಾಟ್ಯ ಮೂಲಕ ದೇವಿಯನ್ನು ಸ್ವಾಗತಿಸುವ ಕಾರ್ಯಕ್ರಮ ಹಾಗೂ ನದಿ ತಟದ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.ತುಂಗಭದ್ರ ಆರತಿ ಮಹೋತ್ಸವ ಬಾಗಿನ ಸಮರ್ಪಣೆ ಕಾರ್ಯಕ್ರಮವು ಅಂದು ಸಂಜೆ 6.30 ರಿಂದ 7-15 ರವರೆಗೆ ಸುಮಾರು 45 ನಿಮಿಷಗಳ ಕಾಲ ನಡೆಯಲಿದ್ದು, ಈ ತುಂಗಭದ್ರ ಆರತಿಯನ್ನು ಶಾಸ್ತ್ರಗಳಂತೆ ನಡೆಸಲು ಗಂಗಾ ಆರತಿಯಲ್ಲಿ ಪಾಲ್ಗೊಂಡ 15 ಅರ್ಚಕರನ್ನು ಕಾಶಿಯಿಂದ ಇಲ್ಲಿಗೆ ಕರೆಸಲಾಗಿದೆ. ತುಂಗಭದ್ರಾ ಆರತಿ ಮಾಡಲು ಸಾರ್ವಜನಿಕರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ದೇವಸ್ಥಾನದಿಂದ ಎರಡು ಸಾವಿರ ಆರತಿಗಳನ್ನು ಭಕ್ತಾದಿಗಳಿಗೆ ಉಚಿತವಾಗಿ ನೀಡಲಾಗುವುದು. ಸಾರ್ವಜನಿಕರು ಆರತಿ ಮಾಡಿ ಅವುಗಳನ್ನು ಹೊಳೆಯಲ್ಲಿ ಬಿಡಬಹುದಾಗಿದೆ ಎಂದರು.

ತುಂಗಭದ್ರ ಆರತಿ ಮಹೋತ್ಸವಕ್ಕೆ ಸಕಲ ಸಿದ್ಧತೆ:*ತುಂಗಭದ್ರ ಆರತಿ ಮಹೋತ್ಸವ ಮತ್ತು ಬಾಗಿನ ಸಮರ್ಪಣೆಯನ್ನು ಪ್ರಪ್ರಥಮ ಬಾರಿಗೆ ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಯೋಜಿಸಲು ಎಲ್ಲಾ ರೀತಿಯ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ತುಂಗಭದ್ರ ಆರತಿ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮಂಗಳವಾರ ಇವರು ಕಾರಣ ಇನ್ನೂ ಹೆಚ್ಚು ಜನರು ಸೇರಲಿದ್ದಾರೆ. ಭಕ್ತಾದಿಗಳಿಗೆ ಸಾರಿಗೆ ಸೌಲಭ್ಯವನ್ನು ಸಹ ಹಮ್ಮಿಕೊಳ್ಳಲಾಗಿದೆ. ಇದರ ಜೊತೆಗೆ ಸಾರ್ವಜನಿಕರಿಗೆ ಕುಡಿಯುವ ನೀರು, ಪೊಲೀಸ್ ಭದ್ರತೆ, ಟ್ರಾಫಿಕ್ ನಿಯಂತ್ರಣಕ್ಕೆ ರಸ್ತೆಯ ಪ್ರಮುಖ ನಾಲ್ಕು ಮಾರ್ಗಗಳ ಮೂಲಕ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.ತುಂಗಭದ್ರಾ ಜಲಾಶಯವು ಸುಮಾರು 12 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಹೊಂದಿದ್ದು, ಇದರಿಂದ 25 ರಿಂದ 30 ಲಕ್ಷ ರೈತರಿಗೆ ಅನುಕೂಲವಾಗಿದೆ. ಈ ವರ್ಷ ಉತ್ತಮ ಮಳೆಯಿಂದಾಗಿ ತುಂಗಭದ್ರಾ ಜಲಾಶಯವು ತುಂಬಿ ತುಳುಕುತ್ತಿದ್ದು, ಇದೇ ರೀತಿ ಪ್ರತಿ ವರ್ಷವೂ ಸಹ ಜಲಾಶಯವು ತುಂಬಿರಲಿ, ಇದರಿಂದ ರೈತರ ಬಾಳು ಸುಖ ಸಮೃದ್ಧಿಯಿಂದ ಕೂಡಿರಲಿ ಮತ್ತು ಅವರ ಬದುಕಿನಲ್ಲಿ ಶಾಂತಿ ನೆಲಸಲಿ ಎಂಬ ಆಶಯದೊಂದಿಗೆ ತಾಯಿ ತುಂಗಭದ್ರೆಗೆ ಆರತಿ ಮತ್ತು ಬಾಗಿನ ಸಮರ್ಪಣೆಯನ್ನು ಮಾಡಲು ಉದ್ದೇಶಿಸಲಾಗಿದೆ. ಈ ಕಾರ್ಯಕ್ರಮವನ್ನು ಪ್ರತಿ ವರ್ಷವೂ ಆಚರಿಸಲಾಗುವುದು ಎಂದು ತಿಳಿಸಿದರು.*ಸಿದ್ಧತೆಗಳ ಪರಿಶೀಲನೆ:* ಪತ್ರಿಕಾಗೋಷ್ಠಿಯ ನಂತರ ಸಂಸದರು ಹುಲಿಗಿಯ ತುಂಗಭದ್ರಾ ನದಿತೀರಕ್ಕೆ ತೆರಳಿ, ತುಂಗಭದ್ರಾ ಆರತಿ ಮಹೋತ್ಸವ ಕಾರ್ಯಕ್ರಮದ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿ, ನದಿತಟ್ಟದಲ್ಲಿ ನಿರ್ಮಾಣ ಮಾಡಿರುವ ವೇದಿಕೆ ಹಾಗೂ ಆರತಿ ಮಹೋತ್ಸವದ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಶ್ರೀ ಹುಲಿಗೆಮ್ಮ ದೇವಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಹೆಚ್.ಪ್ರಕಾಶರಾವ್, ಹುಲಿಗೆಮ್ಮ ದೇವಿಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸದ್ಯಸರು, ಸೇರಿದಂತೆ ಹುಲಿಗೆಮ್ಮ ದೇವಸ್ಥಾನದ ಸಿಬ್ಬಂದಿಗಳು, ಹುಲಿಗಿ ಗ್ರಾಮಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *