ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತರಾಗಿ ವೀರೇಶ ಮಣ್ಣೂರು…

ಬಳ್ಳಾರಿ / ಕಂಪ್ಲಿ: ಪಟ್ಟಣದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಮಹಾತ್ಮಾ ಗಾಂಧೀಜಿ ಪುಣ್ಯತಿಥಿ ಅಂಗವಾಗಿ ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರಲ್ ಟ್ರಸ್ಟ್ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ವೀರೇಶ ಮಣ್ಣೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಸ್ತು, ಸಂಯಮದೊಂದಿಗೆ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಜೊತೆ ಜೊತೆಗೆ ನಾಡಿನ ಸಂಸ್ಕೃತಿ, ಸಂಸ್ಕಾರ ಹಾಗೂ ಪರಂಪರೆಯ ಕಲೆಗಳನ್ನು ಮೈಗೂಡಿಸಿಕೊಳ್ಳಬೇಕು. ಶಿಸ್ತಿನೊಳಗೆ ಕಲಿಯುವುದು ಇಂದಿನ ಕಾಲದ ಮಕ್ಕಳು ಅನುಸರಿಸಿ ನಡೆಯುವುದು ಅಗತ್ಯವಾಗಿದೆ. ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ವಸತಿ ನಿಲಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಅದರ ಅಭಿರುಚಿಯನ್ನು ಉಣಬಡಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.ಭರತನಾಟ್ಯ ಕಲಾವಿದೆ ಸಂಗೀತ ಮಾತನಾಡಿ, ಮಕ್ಕಳು ಕಲೆ, ಸಾಹಿತ್ಯದ ಕಡೆಗೆ ಹೆಚ್ಚಿನ ಒಲವು ತೋರಿಸಬೇಕು. ಇಂದಿನ ಮಕ್ಕಳು ಇಂದಿನ ಪ್ರಜೆಗಳು ಎಂಬಂತೆ ಇಂದಿನ ಮಕ್ಕಳು ನೀವು ನಾಟಕ, ಬಯಲಾಟ, ಭರತನಾಟ್ಯ, ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ, ನಾಡಿನ ಉತ್ತಮ ಕಲಾವಿದರಾಗುವ ಜೊತೆಗೆ ಉನ್ನತ ಮಟ್ಟದಲ್ಲಿ ಶಿಕ್ಷಣದೊಂದಿಗೆ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ಸ.ಹಿ.ಪ್ರಾ.ಶಾಲಾ ಶಿಕ್ಷಕ ಮರಿ ಜಡಿಯಪ್ಪ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ಒಳ್ಳೆಯ ನಡೆ, ನುಡಿ, ಸತ್ಯಗಳನ್ನು ಒಳಗೊಂಡು ನಡೆಯಬೇಕು. ಮಹಾತ್ಮಾ ಗಾಂಧೀಜಿಯವರ ಅಹಿಂಸೆ ಮಾಡಬಾರದು, ಸತ್ಯ ನಿಷ್ಠೆಯಲ್ಲಿ ನಡೆಯಬೇಕು. ಕೆಟ್ಟದ್ದನ್ನು ಅನುಸರಿಸುವುದು ನಮಗೆ ಒಳ್ಳೆತನ ಅಲ್ಲ. ನೈಜತೆಯನ್ನು ಒಳಗೊಂಡು ನಡೆಯಬೇಕು. ಅರಿತು ಬಾಳಬೇಕು ಮರೆತು ಬಾಳಬಾರದು ಜೀವನದಲ್ಲಿ ನಮ್ಮನ್ನು ನಾವು ಕಂಡುಕೊಳ್ಳಬೇಕು ಎಂದರು. ಸಾಂಸ್ಕೃತಿಕ ಕಾರ್ಯಕ್ರಮಗಳು : ಕುರುಬರ ಹೇಮೇಶ್ವರ ಮತ್ತು ತಂಡದವರು ಜನಪದ ಗೀತೆಗಳ ಮುಖೇನ ಗಮನ ಸೆಳೆದರು. ಈ ಸಂದರ್ಭದಲ್ಲಿ ನಿಲಯ ಪಾಲಕ ವಿರುಪಾಕ್ಷಿ, ಸಿಬ್ಬಂದಿ ಕೆ.ಪಂಪಾಪತಿ, ಗಾನಯೋಗಿ ಪಂಡಿತ ಪುಟ್ಟರಾಜ ಅಭಿರುಚಿ ಕಲ್ಚರಲ್ ಟ್ರಸ್ಟಿನ ಅಧ್ಯಕ್ಷ ಪುರುಷೋತ್ತಮ. ಡಿ ಮತ್ತು ಸರ್ವಸದ್ಯಸರು ಭಾಗವಹಿಸಿದ್ದರು.

ವರದಿ : ಜಿಲಾನಸಾಬ್ ಬಡಿಗೇರ್
